ವಾಕ್ - ಶ್ರವಣ ಭಾಷಾವಿಜ್ಞಾನ

	ಭಾಷೆಯನ್ನು ಕಲಿಯುವ ಮತ್ತು ಕೇಳುವ ಪ್ರಕ್ರಿಯೆಯನ್ನು ಕುರಿತು ಅಧ್ಯಯನ ಮಾಡುವ ಭಾಷಾವಿಜ್ಞಾನದ ಒಂದು ಪ್ರಮುಖ ಶಾಖೆ. ಮಾನವನ ಬಹುಮುಖ ಬೆಳೆವಣಿಗೆಯಲ್ಲಿ ಸಂವಹನ (ಕಮ್ಯುನಿಕೇಶನ್) ಅತಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಪಶು-ಪಕ್ಷಿಗಳೂ ತಮ್ಮದೇ ಆದ ಶೈಲಿಯಲ್ಲಿ ಸಂವಹನ ನಡೆಸಿದರೂ ಅದು ಮೂಲತಃ ಬಹಳ ಸರಳ ರೀತಿಯದ್ದಾಗಿರುತ್ತದೆ. ಮಾನವ ಸಮಾಜ ಜೀವಿಯಾದುದರಿಂದ ಅದರ ರೀತಿ-ನೀತಿಗಳಿಗೆ ಬದ್ಧವಾಗಿ ಒಂದು ಸಂಕೀರ್ಣ ರೀತಿಯಲ್ಲಿ ಸಂವಹನ ನಡೆಸುತ್ತಾನೆ. ಸಂವಹನ, ಭಾಷಾ ಸಂಕೇತಗಳ ಸಹಾಯದಿಂದ ಉಂಟಾಗುತ್ತದೆ. ಮಾನವನು ಭಾಷಾ ಸಂಕೇತಗಳನ್ನು ಹಲವಾರು ರೀತಿಯಲ್ಲಿ ಅಳವಡಿಸಿಕೊಂಡಿರುವ ದೃಷ್ಟಾಂತಗಳಿವೆ. ಇದು ಮಾತಿನ ಸ್ವರಗಳ ತರ್ಕಬದ್ಧ ಜೋಡಣೆಯಿರಬಹುದು, ಬರೆವಣಿಗೆಯ ಅಕ್ಷರ ಮಾಲೆಯಿರಬಹುದು, ಚಿತ್ರಗಳ ಅಥವಾ ಕೈಸನ್ನೆಗಳ ಮಾಧ್ಯಮವಿರ ಬಹುದು ಅಥವಾ ಹಲವಾರು ಮಾಧ್ಯಮಗಳ ಒಟ್ಟಾರೆ ಜೋಡಣೆಯಿಂದಲೂ ಇದು ಉಂಟಾಗಬಹುದು.

	ಭಾಷೆ-ಮಾತುಗಳ ವ್ಯತ್ಯಾಸ: ಸಂವಹನಕ್ಕಾಗಿ ಮಾನವ ಬಳಸುವ ಅರ್ಥಬದ್ಧ ಸಂಕೇತಗಳ ಸರಣಿಯನ್ನು ಭಾಷೆ (ಲ್ಯಾಂಗ್ವೇಜ್) ಎಂದು ಪರಿಗಣಿಸಲಾಗಿದೆ. ಬಾಯಿಯ ಅವಯವಗಳ ಸಹಾಯದಿಂದ ಧ್ವನಿಯ ಸ್ವರ ಮಾರ್ಪಾಡಾಗಿ, ಅರ್ಥಬದ್ಧ ಶಬ್ದಗಳ ಜೋಡಣೆಯಿಂದಾಗಿ ಮಾತು (ಸ್ಪೀಚ್) ಉಚ್ಚಾರಣೆಯಾಗುತ್ತದೆ.

	ಭಾಷೆ-ಮಾತಿನ ಬೆಳೆವಣಿಗೆಗೆ ಮಾನವನ ಪಂಚೇಂದ್ರಿಯಗಳ  ಲ್ಲೊಂದಾದ ಶ್ರವಣೇಂದ್ರಿಯ ಬಲುಮುಖ್ಯ ಪಾತ್ರವಹಿಸುತ್ತದೆ. ನವಜಾತ ಶಿಶು ಶ್ರವಣೇಂದ್ರಿಯದ ಸಹಾಯದಿಂದ ತನ್ನ ಸುತ್ತಲಿನ ಪರಿಸರದ ಅರಿವು ಮೂಡಿಕೊಳ್ಳುತದೆ. ತಾಯಿಯ ಗರ್ಭದೊಳಗಿರು ವಾಗಲೇ ಶ್ರವಣೇಂದ್ರಿಯದ ಬೆಳೆವಣಿಗೆ ಪ್ರಾರಂಭವಾಗುವುದರಿಂದ ಜನ್ಮ ತಳೆದ ಘಳಿಗೆಯಿಂದಲೂ ಶಿಶು ತನ್ನ ಸುತ್ತಲಿರುವ ಶಬ್ದ ಪ್ರಪಂಚವನ್ನು ಅರಿವು ಮಾಡಿಕೊಳ್ಳುತ್ತದೆ. ಪರಿಸರದಲ್ಲಿ ಹಿರಿಯರು ಆಡುವ ಮಾತುಗಳನ್ನು ಶ್ರವಣೇಂದ್ರಿಯದ ಮೂಲಕ ಗ್ರಹಿಸಿ ಬೆಳೆಯುತ್ತಾ 8 ರಿಂದ 10 ತಿಂಗಳೊಳಗೆ ಮಾತುಗಳಿಗೆ ಸ್ಪಂದಿಸುವ ಶಕ್ತಿಯನ್ನು ಮಗು ಪಡೆಯುತ್ತದೆ. ತದನಂತರ ಒಂದು ವರ್ಷದೊಳಗೆ ಸ್ವರಗಳ ಜೋಡಣೆಯಿಂದ ಅರ್ಥಬದ್ಧ ಪದಗಳ ಉಚ್ಚಾರಣೆ ಮಾಡಲು ಪ್ರಾರಂಭಿಸುತ್ತದೆ. ಸಂದರ್ಭಗಳ ಪರಿಕಲ್ಪನೆ ಮೂಡುತ್ತಿದ್ದ ಹಾಗೆಯೇ ಸೂಕ್ತ ಭಾಷಾ ಸಂಕೇತದ ಸ್ವರ ಜೋಡಣೆಗಳನ್ನು ಮಾಡಿ ತನ್ನ ಕುಟುಂಬದವರೊಡನೆ ಸಂವಹನ ನಡೆಸುತ್ತದೆ.

ಚಿತ್ರ-1

	ಭಾಷೆಯ ಬೆಳೆವಣಿಗೆಗೆ ಪೂರಕವಾದ ಅಂಶಗಳು: ಸಾಮಾನ್ಯವಾಗಿ ಒಂದು ನಿರ್ದಿಷ್ಟ ಗುಂಪಿಗೆ ಹಾಗೂ ಆಯಾ ಸಮಾಜದ ರೀತಿ-ನೀತಿಗಳಿಗೆ ಬದ್ಧವಾಗಿ ಭಾಷೆ ರಚಿಸಲ್ಪಟ್ಟಿದೆ. ಭಾಷಾ ಸಂಕೇತಗಳ ಅರ್ಥ ಎಲ್ಲಾ ಸಮಾಜದಲ್ಲೂ ಒಂದೇ ರೀತಿಯದ್ದಾಗಿರಬೇಕೆಂಬ ನಿಯಮವೇನಿಲ್ಲ. ಒಂದು ನಿರ್ದಿಷ್ಟ ಸಮಾಜ ನಿರ್ಮಿಸಿಕೊಂಡಿರುವ ಭಾಷಾ ಸಂಕೇತಗಳ ಅರ್ಥ ಒಂದು ರೀತಿಯದಾಗಿದ್ದರೆ ಇನ್ನೊಂದು ಸಮಾಜದಲ್ಲಿ ಅದೇ ಸಂಕೇತ ವಿಭಿನ್ನ ಅರ್ಥ ಹೊಂದಿರುವ ಸಾಧ್ಯತೆ ಇದೆ. ಮಗುವಿನ ಭಾಷೆಯ ಬೆಳೆವಣಿಗೆಗೆ ಈ ಅಂಶಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ: 1. ಒಂದೇ ಸಮನಾದ ನಿಯಮಗಳನ್ನು ಹೊಂದಿರುವ ಒಂದು ಸಮಾಜ, 2. ಭಾವನೆ ಮತ್ತು ವಿಚಾರಗಳನ್ನು ವ್ಯಕ್ತಪಡಿಸುವ ಆಸಕ್ತಿ, 3. ಮಾನವ ಸಂಬಂಧ ರೂಢಿಸಿಕೊಳ್ಳುವ ಪರಿಪಾಠ, 4. ಮುಂದಿನ ಜನಾಂಗಕ್ಕೆ ಭಾಷಾ ಸಂಪ್ರದಾಯ ತಿಳಿಸುವ ಇಚ್ಛೆ, 5. ಹೆಚ್ಚು ಹೆಚ್ಚು ಮೂಲಗಳಿಂದ ಭಾಷೆ ಕಲಿಸುವ/ಕಲಿಯುವ ಕೌಶಲತೆ ಹಾಗೂ 6) ಭಾಷಾ ಸಂಕೇತಗಳನ್ನು ತಿಳಿಸುವ/ತಿಳಿಯಲ್ಪಡುವ ಜ್ಞಾನೇಂದ್ರಿಯಗಳ ಸಹಕಾರ (ಶ್ರಾವ್ಯ, ದೃಷ್ಟಿ, ಸ್ಪರ್ಶ, ಘ್ರಾಣ ಮತ್ತು ರುಚಿ).

	ಮಾತನಾಡಲು ಸಹಕರಿಸುವ ಮುಖ್ಯ ಅಂಗಗಳು: ಒಂದು ನಿರ್ದಿಷ್ಟ ಭಾಷಾ ಸಂಕೇತದೊಡನೆ ಮಾತನಾಡುವ ಕ್ರಿಯೆಗೆ ನರಮಂಡಲ, ಶ್ವಾಸಕೋಶ, ಧ್ವನಿಪೆಟ್ಟಿಗೆ, ಬಾಯಿಯ ಅವಯವಗಳಾದ ತುಟಿ, ನಾಲಗೆ, ತಾಲು (ಪ್ಯಾಲೆಟ್ ರೂಫ್ ಆಫ್ ಮೌತ್), ದವಡೆ ಹಾಗೂ ಅವುಗಳ ಸ್ನಾಯುಗಳ ತಂಡ ಅತಿ ಮುಖ್ಯಪಾತ್ರ ವಹಿಸುತ್ತವೆ. ಚಿತ್ರ 2 ಮತ್ತು 3 ಮಾತನಾಡಲು ಸಹಾಯಕಾರಿಯಾಗಿರುವ ಅಂಗಗಳನ್ನು ಸೂಚಿಸುತ್ತವೆ.

ಚಿತ್ರ-2

	ಶ್ರವಣ ಗ್ರಹಿಕೆ: ಶ್ರವಣೇಂದ್ರಿಯವನ್ನು ಹೊರಕಿವಿ, ಮಧ್ಯಕಿವಿ ಮತ್ತು ಒಳಕಿವಿ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಚಿತ್ರ 4 ಶ್ರವಣೇಂದ್ರಿಯದ ಭಾಗಗಳನ್ನು ಸೂಚಿಸುತ್ತದೆ.

ಚಿತ್ರ-3

	ಹೊರಕಿವಿ: ಇದು ಕಿವಿಯಾಲೆ ಮತ್ತು ಹೊರಕಿವಿ ನಾಳ ದಿಂದ ಕೂಡಿರುತ್ತದೆ. ಕಿವಿಯಾಲೆಯು ಶಬ್ದ ತರಂಗಗಳನ್ನು ಸಂಗ್ರಹಿಸಿ ಮಧ್ಯ ಕಿವಿಯೆಡೆ ತಲುಪಿಸು ವುದರಲ್ಲಿ ಸಹಾಯ ಮಾಡುತ್ತದೆ. ಶಬ್ದದ ಮೂಲದ ದಿಕ್ಕನ್ನು (ಲೋಕಲೈಸೇಶನ್ ಆಫ್ ಸೌಂಡ್ಸ್) ಕಂಡು ಹಿಡಿಯುವುದರಲ್ಲೂ ಇದು ಸಹಾಯಮಾಡುತ್ತದೆ.

ಚಿತ್ರ-4

	ಮಧ್ಯಕಿವಿ: ಹೊರಕಿವಿನಾಳದ ಒಳತುದಿಯಲ್ಲಿ ಕಿವಿ ತಮಟೆ (ಇಯರ್‍ಡ್ರಮ್) ಇದೆ. ಇದು ಮೂರು ಪದರಗಳನ್ನು ಹೊಂದಿದೆ. ಕರ್ಣನಾಳ (ಯೂಸ್ಟೇಶೆಯಿನ್ ಟ್ಯೂಬ್) ಮಧ್ಯ ಕಿವಿಯನ್ನು ಗಂಟಲಿನ ಮೇಲ್ಭಾಗಕ್ಕೆ ಕೂಡಿಸುತ್ತದೆ. ಮಧ್ಯಕಿವಿ, ಹೊರಕಿವಿ ಮತ್ತು ಒಳಕಿವಿಯನ್ನು ಸೇರಿಸುವ ಸೇತುವೆಯಂತಿದೆ.

ಚಿತ್ರ-5

	ಒಳಕಿವಿ: ಒಳಕಿವಿಯಲ್ಲಿ ಶ್ರವಣೇಂದ್ರಿಯವಾದ ಕರ್ಣ ಶಂಖ, ಸಮತೋಲನದ ಇಂದ್ರಿಯವಾದ ನಾಳ ಕೋಶಗಳು ಇವೆ. ಕರ್ಣಶಂಖದಲ್ಲಿ ಹಲವು ಸೂಕ್ಷ್ಮಕೋಶಗಳಿವೆ. ಈ ಕೋಶಗಳು ದ್ರವದಿಂದ ಸುತ್ತುವರಿಯ ಲ್ಪಟ್ಟಿವೆ. ಕರ್ಣಶಂಖದ ಹಿಂದೆ ಶ್ರವಣ ನರವಿದೆ. ನಾಳಕೋಶದಲ್ಲಿ ಮೂರು ಅರ್ಧವೃತ್ತಾಕಾರದ ನಾಳಗಳಿವೆ. ಇದು ಶಬ್ದ ಕೇಳುವ ಕೆಲಸಕ್ಕೆ ಸಂಬಂಧಿಸಿಲ್ಲ.

	ಶಬ್ದದ ಅಲೆಗಳು ಕಿವಿಯಾಲೆ ಮತ್ತು ಹೊರಕಿವಿನಾಳದ ಮೂಲಕ ಸಾಗಿ ಕಿವಿಯ ತಮಟೆಯನ್ನು ಕಂಪಿಸುತ್ತವೆ. ಮಧ್ಯ ಕಿವಿಯಲ್ಲಿನ ಕಿವಿಮೂಳೆಗಳ ಮೂಲಕ ಈ ಕಂಪನ ಒಳಕಿವಿಯ ಕರ್ಣಶಂಖದಲ್ಲಿರುವ ದ್ರವವನ್ನು ತಲುಪಿ, ಅಲ್ಲಿರುವ ಜೀವಕೋಶಗಳನ್ನು ಉತ್ತೇಜಿಸುತ್ತದೆ. ಕರ್ಣಶಂಖದಲ್ಲಿ ಉಂಟಾದ ಈ ಕಂಪನಗಳು ಶ್ರವಣ ನರದ ಮೂಲಕ ಮೆದುಳಿನ ಶ್ರವಣ ಕೇಂದ್ರಕ್ಕೆ ತಲುಪಿ ಶಬ್ದ ಗ್ರಹಿಸಲು ನೆರವಾಗುತ್ತವೆ.

	ಮಾತನಾಡಲು ಸಹಾಯ ಮಾಡುವ ಅಂಗಗಳು ಮತ್ತು ಶ್ರವಣೇಂದ್ರಿಯದ ಯಾವುದೇ ಭಾಗದ ರಚನೆ ಅಥವಾ ಕ್ರಿಯೆಯಲ್ಲಿ ಆಗುವ ನ್ಯೂನಗಳು ವಾಕ್-ಶ್ರವಣ ಭಾಷಾ ದೋಷಗಳಿಗೆ ಮೂಲ ಕಾರಣಗಳಾಗಿರುತ್ತವೆ.

	ವಾಕ್-ಶ್ರವಣ ಭಾಷಾ ದೋಷಗಳು: ವಾಕ್-ಶ್ರವಣ ಭಾಷಾ ಸಂಯೋಜನೆಯಲ್ಲಿ ಅಥವಾ ಕ್ರಿಯಾ ಚಟುವಟಿಕೆಗಳಲ್ಲಿ ಉಂಟಾಗಬಹುದಾದ ಹಲವಾರು ಕಾರಣಗಳಿಂದ ವಾಕ್-ಶ್ರವಣ ಭಾಷಾ ದುರ್ಬಲತೆ/ದೋಷಗಳು (ಕಮ್ಯುನಿಕೇಶನ್ ಡಿಸಾರ್ಡರ್ಸ್) ಉಂಟಾಗುವ ಸಾಧ್ಯತೆ ಇದೆ. ಇಂತಹ ದೋಷಯುಕ್ತ ಸ್ಥಿತಿ ಆನುವಂಶೀಯವಾಗಿರಬಹುದು, ಜನನ ಕಾಲದಲ್ಲಿ ಅಥವಾ ಜನನಾನಂತರದ ಕಾರಣಗಳಿಂದ ಉಂಟಾಗಬಹುದು. ವಾಕ್-ಶ್ರವಣ ಭಾಷಾ ದೋಷಗಳ ಪ್ರಮಾಣ ಇಂತಿಷ್ಟೇ ಎಂದು ನಿಖರವಾಗಿ ಹೇಳಲು ಕಷ್ಟಸಾಧ್ಯ. ಅಂಕಿ-ಅಂಶಗಳ ಪ್ರಕಾರ ಸರಿಸುಮಾರು ಸೇ. 5ರಿಂದ 6 ಮಂದಿ ಇಂತಹ ಸ್ಥಿತಿಗೆ ಒಳಪಟ್ಟಿರುವುದು ಸ್ಪಷ್ಟವಾಗಿದೆ. ವಾಕ್-ಶ್ರವಣ ಭಾಷಾ ದೋಷ ಪ್ರಮಾಣವನ್ನು ಕಡಿಮೆ ಮಾಡಲು ದೋಷಗಳಿಗೊಳಗಾಗಬಹುದಾದ ಶಿಶು/ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ವಿಧಾನಗಳಿಂದ ಚಿಕಿತ್ಸೆ/ಸೌಲಭ್ಯ/ತರಬೇತಿ ನೀಡುವ ಯತ್ನಗಳೂ ನಡೆಯುತ್ತಿವೆ.

	ವಾಕ್-ಭಾಷಾ ದೋಷಗಳು ಮತ್ತು ಅವುಗಳ ಲಕ್ಷಣ: ವಾಕ್-ಭಾಷಾ ದೋಷಗಳು ಶೈಶವಾವಸ್ಥೆಯಿಂದ ವೃದ್ಧಾಪ್ಯದವರೆಗೂ ಹಲವಾರು ರೀತಿಯಲ್ಲಿ ಹಾಗೂ ಪ್ರಮಾಣದಲ್ಲಿ ಗೋಚರಿಸುವ ಸಾಧ್ಯತೆ ಇದೆ. ಕೆಲವು ರೀತಿಯ ದೋಷಗಳು ಕೇವಲ ವಾಕ್ (ಮಾತಿನ) ದೋಷಗಳಿಗಷ್ಟೇ ಮೀಸಲಾದರೆ ಮತ್ತಿತರ ದೋಷಗಳು ಭಾಷಾದೋಷಗಳಿಂದಲೂ ಕೂಡಿರುವ ಸಂಭವವಿದೆ. ಉದಾ: ಹತ್ತು ವರ್ಷದ ಮಗು ರವಿ ಎನ್ನುವ ಬದಲು ಲವಿ ಎಂದು ಹೇಳಿದಾಗ ಅದನ್ನು ವಾಕ್ ವಿಜ್ಞಾನದಲ್ಲಿ ಉಚ್ಚಾರಣಾ ದೋಷವೆಂದು ಹೇಳಲಾಗುತ್ತದೆ. ನಾಲಗೆ ಹಿಡಿದಿರುವುದು (ಟಂಗ್ ಟೈ), ಸೀಳುತುಟಿ (ಕ್ಲೆಪ್ಟ್ ಲಿಪ್), ಸೀಳು ಅಂಗಳು (ಕ್ಲೆಪ್ಟ್ ಲಿಪ್), ಬಾಯಿಯ ಸ್ನಾಯುಗಳ ವೈಕಲ್ಯ (ಓರಲ್ ಮೋಟರ್ ಡಿಸೆಬಿಲಿಟಿ), ಶ್ರವಣ ದೋಷ (ಹಿಯರಿಂಗ್ ಇಂಪೇಗ್‍ಮೆಂಟ್), ಮಿದುಳಿನ ನಿಸ್ಸತ್ವ (ಸೆರಬ್ರಲ್ ಪಾಲ್ಸಿ) ಇವುಗಳಿಂದ ಉಚ್ಚಾರಣಾ ದೋಷ ಉಂಟಾಗುತ್ತವೆ.

	ಮಾತಿನ ನಿರರ್ಗಳತೆಯಲ್ಲಿ ಅಡ್ಡಿಯುಂಟುಮಾಡುವ ಸ್ಥಿತಿಯನ್ನು ತೊದಲು (ಉಗ್ಗು) ಎಂದು ಕರೆಯಲಾಗುತ್ತದೆ. ಉದಾ: ನ್ . . . . ನ್ . . . ನನ್ನ ಹ . . ಹ . . ಹೆಸರು . . . . ಅಂತೆಯೇ ಧ್ವನಿಯ ಶೃತಿಯಲ್ಲಿ, ಏರಿಳಿತದಲ್ಲಿ ಅಥವಾ ಗುಣ ಲಕ್ಷಣಗಳಲ್ಲಿ ವ್ಯತ್ಯಾಸವಿದ್ದಾಗ ವಿವಿಧ ರೀತಿಯ ಧ್ವನಿ ತೊಂದರೆಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಧ್ವನಿ ಮತ್ತು ಉಚ್ಛಾರಣಾ ತೊಂದರೆಗಳು ಸೀಳುತುಟಿ/ಸೀಳು ಅಂಗಳು ಇರುವ ಮಕ್ಕಳಲ್ಲಿ ಸರ್ವೇ ಸಾಮಾನ್ಯ. ಅಂತೆಯೇ, ತೊದಲು/ಉಗ್ಗು ಹಲವಾರು ಬಾರಿ ಅನುಕರಣೆಯಿಂದ ಬರುತ್ತದೆ ಎಂದು ಭಾವಿಸಲಾಗಿದೆ. ಆದರೆ ಸಂಶೋಧನೆಯ ಪ್ರಕಾರ ಆನುವಂಶೀಯತೆಯೂ ಈ ಸ್ಥಿತಿಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಧ್ವನಿ ತೊಂದರೆಗಳು ಬಾಲ್ಯದಲ್ಲಿ, ಷೋಡಶಾವಸ್ಥೆಯಲ್ಲಿ ಹಾಗೂ ವೃತ್ತಿಪರ ಧ್ವನಿ ಬಳಸುವವರಲ್ಲಿ (ಹಾಡುಗಾರರು, ಶಿಕ್ಷಕರು, ವಕೀಲರು, ಮತ್ತಿತರು) ಸಾಮಾನ್ಯವಾಗಿ ಕಂಡುಬರುವ ಸಾಧ್ಯತೆ ಹೆಚ್ಚು. ಗಂಟಲಿನ ಅರ್ಬುದ (ಕ್ಯಾನ್ಸರ್) ರೋಗ ಉಂಟಾದಾಗ ಶಸ್ತ್ರಚಿಕಿತ್ಸೆಯಿಂದ ಧ್ವನಿಪೆಟ್ಟಿಗೆಯನ್ನು ತೆಗೆದಾಗ ಧ್ವನಿಯ ಉಪಯೋಗ ಕಳೆದುಕೊಳ್ಳುವುದು ಅನಿವಾರ್ಯ.

	ಭಾಷಾದೋಷಗಳು: ಮಾತಿನ ಉಚ್ಚಾರಣೆ ಸ್ಪಷ್ಟವಾಗಿದ್ದು, ನಿರರ್ಗಳತೆಯೂ ಇದ್ದು, ಧ್ವನಿಯ ತೊಂದರೆಗಳಾವುವೂ ಇಲ್ಲದಿದ್ದರೂ ಹಲವು ಮಕ್ಕಳಲ್ಲಿ, ವಯಸ್ಕರಲ್ಲಿ ಅಥವಾ ವಯೋವೃದ್ಧರಲ್ಲಿ ಸಂವಹನ ಕ್ರಿಯೆಯಲ್ಲಿ ಅಡಚಣೆಗಳು ಕಂಡುಬರುವ ಸಾಧ್ಯತೆ ಇದೆ. ಭಾಷಾ ಸಂಕೇತಗಳ ತರ್ಕಬದ್ಧ ಪ್ರಯೋಗ ಮಾಡದಿದ್ದಾಗ ಭಾಷಾ ದೋಷಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಶ್ರವಣ ದೋಷಗಳು (ಹಿಯರಿಂಗ್ ಇಂಪೇರ್‍ಮೆಂಟ್), ಬುದ್ಧಿ ಮಾಂದ್ಯತೆ (ಮೆಂಟಲ್ ರಿಟ್ರಾಡೇಶನ್), ಮಿದುಳಿನ ನಿಸ್ಸತ್ವ (ಸೆರೆಬ್ರಲ್ ಪಾಲ್ಸ್), ತಂತನತೆ (ಆಟಿಸಮ್ಯ), ಕಲಿಯುವಿಕೆಯ ತೊಂದರೆಗಳು (ಲರ್ನಿಂಗ್ ಡಿಸಾರ್ಡರ್ಸ್), ಕ್ಷೀಣ ಏಕಾಗ್ರತೆ ಮತ್ತು ಅತಿ ಚಟುವಟಿಕೆ (ಆಟೆನ್ಶನ್ ಡಿಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್), ನಡವಳಿಕೆ ಮತ್ತು ಮನಸ್ಥಿತಿಯ ತೊಂದರೆಗಳು (ಬಿಹೇವಿಯರ್ ಅಂಡ್ ಎಮೋಶನಲ್ ಡಿಸಾರ್ಡರ್), ವಿಶಿಷ್ಟ ಭಾಷಾ ದೋಷಗಳು (ಸ್ಪೆಸಿಫಿಕ್ ಲಾಂಗ್ವೇಜ್ ಇಂಪೇರ್‍ಮೆಂಟ್), ಪಾಶ್ರ್ವವಾಯು (ಪಾರಾಲಿಸಿಸ್) ಅಥವಾ ನರರೋಗಗಳಿಗೊಳಪಟ್ಟು ಉಂಟಾಗುವ ಭಾಷಾ ದೋಷಗಳು, ವೃದ್ಧಾಪ್ಯದಲ್ಲಿ ಭಾಷಾಕೌಶಲತೆಯ ಕ್ಷೀಣತೆ ಇಂತಹ ಅನೇಕ ಸ್ಥಿತಿಗಳು ಸರ್ವೇಸಾಮಾನ್ಯ. ಅಪಘಾತದಿಂದೊದಗಿ ಬರುವ ಮೆದುಳಿನ ಪೆಟ್ಟಿನಿಂದಾಗಿ ಭಾಷಾ ಕೇಂದ್ರದ ಕ್ರಿಯೆ ಸ್ಥಬ್ದಗೊಂಡಾಗ ನಾನಾ ರೀತಿಯ ಭಾಷಾ ದೋಷಗಳು ಉಂಟಾಗುವುದು ಸಹಜ.

	ವಾಕ್-ಭಾಷಾ ದೋಷಗಳನ್ನು ಗುರುತಿಸಲು ಸಹಾಯ ಮಾಡುವ ಗುಣ ಲಕ್ಷಣಗಳು: 1. ಪದಭಂಡಾರ ಕಡಿಮೆಯಿರುವುದು, 2. ವಾಕ್ಯರಚನೆಯಲ್ಲಿ ಕೊರತೆ, 3. ಪದಗಳ ಹುಡುಕಾಟ/ಪದಗಳ ಅದಲು-ಬದಲು, 4. ಉಚ್ಚಾರಣೆ ಸರಿಯಿಲ್ಲದಿರುವುದು, 5. ಧ್ವನಿ ಇಲ್ಲದಿರುವುದು/ಕ್ಷೀಣವಾಗಿರುವುದು/ಗಡಸಾಗಿರುವುದು/ಕರ್ಕಶವಾಗಿರುವುದು/ ಮೂಗಿನಿಂದ ಹೊರಟ ಸ್ವರದಂತಿರುವುದು, 6. ಮಾತಿನ ನಿರರ್ಗಳತೆಯಲ್ಲಿ ತಡೆಯುಂಟಾಗಿರುವುದು, 7. ಶಬ್ದದ ದಿಕ್ಕನ್ನು ಸರಿಯಾಗಿ ಗುರುತಿಸದಿರುವುದು, 8. ತದೇಕ ಚಿತ್ತ ಇಲ್ಲದೆ ಅತಿ ಚಟುವಟಿಕೆಯನ್ನು ಹೊಂದಿರುವುದು, 9. ಮಾತಿನ ಅವಯವಗಳ ರಚನೆ/ಕ್ರಿಯೆಯಲ್ಲಿ ದೋಷಗಳು, 10. ಮಾನಸಿಕ/ಸಾಮಾಜಿಕ ನಡತೆಯಲ್ಲಿ ಕೊರತೆ, 11. ಗುಂಪಿನೊಡನೆ ಆಟವಾಡದೆ ತಂತನತೆಯಿಂದ ಕೂಡಿರುವುದು, 12. ನ್ಯೂನ ಸೂಚಿಸುವ ಮುಖಚರ್ಯೆ/ಗುಣಲಕ್ಷಣಗಳು, 13. ಅಪಸ್ಮಾರ, ಮಿದುಳಿನ ಪೆಟ್ಟು, ತೀವ್ರಸ್ಥಿತಿಯ ಕಾಯಿಲೆಗಳು ಹಾಗೂ 14. ಧ್ವನಿಪೆಟ್ಟಿಗೆಯ ಅರ್ಬುದ ರೋಗ.

	ಶ್ರವಣ ದೋಷಗಳು: ಕಿವಿಯ ರಚನೆ/ಕ್ರಿಯೆಯಲ್ಲಿ ಉಂಟಾದ ಅಡಚಣೆಗಳಿಂದ ಶ್ರವಣ ದೋಷಗಳು ಉಂಟಾಗುತ್ತವೆ. ಹೊರಕಿವಿ: ಆನುವಂಶೀಯ ವಿರೂಪಗಳು, ಕಿವಿನಾಳದ ಮುಚ್ಚುವಿಕೆ, ಕಿವಿನಾಳದಲ್ಲಿ ಅಡ್ಡಿಯುಂಟುಮಾಡುವ ಗುಗ್ಗೆ, ಕಿವಿಯ ಸೋಂಕು ಇನ್ನಿತರ ಕಾರಣಗಳಿಂದ ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. 

ಮಧ್ಯಕಿವಿ: ಕಿವಿತಮಟೆಯ ಹರಿಯುವಿಕೆ, ಮಧ್ಯ ಕಿವಿಯ ಸೋಂಕು, ಕಿರುಮೂಳೆಗಳ ವಿರೂಪ ಅಥವಾ ಗಡಸು ರೋಗ (ಆಟೊಸ್ಲೆರೋಸಿಸ್). ಒಳಕಿವಿ: ಕರ್ಣ ಶಂಖ ಅಥವಾ ಶ್ರವಣ ನರದ ನ್ಯೂನಗಳು ಒಳಕಿವಿಯ ಜನನಾಗತ ವಿರೂಪಗಳು, ಕರ್ಣ ಶಂಖದ ಸೂಕ್ಷ್ಮಕೋಶಗಳ ನಾಶವಾಗುವಿಕೆ, ಮುಪ್ಪು, ಅಪಘಾತದಿಂದ ಪೆಟ್ಟು, ಅನುಗಾಲದ ಗದ್ದಲವುಳ್ಳ ಪರಿಸರದ ಪರಿಣಾಮ, ಕಿವಿಯ ಕೋಶಗಳಿಗೆ ತೊಂದರೆ ಉಂಟುಮಾಡುವ ಔಷಧಿ ಸೇವನೆ (ಆಟೊಟಾಕ್ಸಿಕ್ ಡ್ರಗ್ಸ್), ಕಿವಿಯ ಸೋಂಕು, ಒಳಕಿವಿಯ ದ್ರವಗಳ ಒತ್ತಡದ ಬದಲಾವಣೆ, ಕರ್ಣ ಶಂಖದ ರಕ್ತ ಚಲನೆಯಲ್ಲಿ ವೈಪರೀತ್ಯ, ಶ್ರವಣ ನರದಲ್ಲಿ ನರಕೋಶಗಳ ಹಾನಿ, ಇಂತಹ ಹಲವಾರು ಕಾರಣಗಳಿಂದ ಒಳಕಿವಿ ದೋಷಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಈ ರೀತಿಯ ದೋಷಗಳು ತೀವ್ರ ಪ್ರಮಾಣದ್ದಾಗಿದ್ದು, ಅಂತಹವರು ಶ್ರವಣೋಪಕರಣದ ಸೌಲಭ್ಯ ಪಡೆಯಬೇಕಾಗುತ್ತದೆ.

	ಕೆಲವರಿಗೆ ಸಾಂಪ್ರದಾಯಿಕವೆಂದು ಹೇಳುವ ಕಿವುಡುತನವಿರುವುದಿಲ್ಲ. ಬೇರೆಯವರ ರೀತಿ ಶಬ್ದ ಆಲಿಸಿದರೂ ಶಬ್ದ ಗ್ರಹಿಸುವುದರಲ್ಲಿ ಮಾತ್ರವಲ್ಲದೆ, ಓದುವುದು, ಗಮನ ಮತ್ತು ಜ್ಞಾಪಕ ಶಕ್ತಿಯಲ್ಲಿ ನ್ಯೂನ ಇರುವುದು.

	ಶ್ರವಣ ಕಾರ್ಯ ಗತಿ ಬಲು ಸೂಕ್ಷ್ಮರಚನೆಯಿಂದ ಕೂಡಿದ್ದು, ಅನೇಕ ಕಾರಣಗಳಿಂದ ಶ್ರವಣಾಂಗಗಳಿಗೆ ಹಾನಿ ಒದಗಬಹುದು. ಸಮಯಪ್ರಜ್ಞೆಯಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಲ್ಲಿ ಶ್ರವಣ ಶಕ್ತಿಯನ್ನು ಉಳಿಸಿಕೊಳ್ಳಬಹುದು.

	ವಾಕ್-ಶ್ರವಣ ಭಾಷಾ ದೋಷಗಳನ್ನು ಗುಣಲಕ್ಷಣಗಳ ಸಹಾಯದಿಂದ ಸುಲಭದಲ್ಲಿ ಗುರುತಿಸಿ ತಜ್ಞರ ಪರೀಕ್ಷೆಗೊಳಪಡಿಸಿ, ಅದಕ್ಕೆ ಸೂಕ್ತ ವೈದ್ಯಕೀಯ ಸಹಾಯ, ಶ್ರವಣೋಪಕರಣಗಳು ಮತ್ತು ವಾಕ್-ಭಾಷಾ-ತರಬೇತಿ/ಚಿಕಿತ್ಸೆಗಳನ್ನು ನೀಡುವುದು ಅಪೇಕ್ಷಣೀಯ. ಇಂತಹ ಸ್ಥಿತಿಯನ್ನು ಎಳೆಯ ಪ್ರಾಯದಲ್ಲೇ ಅಥವಾ ಪ್ರಾರಂಭಿಕ ಹಂತದಲ್ಲೇ ಗುರುತಿಸಿದರೆ ಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಅನೇಕ ಪರಿಶೋಧನೆಗಳು “ಅಪಾಯಕಾರಿ” ಅಂಶಗಳನ್ನು ಪ್ರತಿಯೊಂದು ಸ್ಥಿತಿಗೂ ಗುರುತಿಸಿವೆ. ಈ ಅಂಶಗಳನ್ನು ಪ್ರಾರಂಭದಲ್ಲೇ ತಕ್ಕ ಯೋಜನೆಗಳಿಂದ ನಿಯಂತ್ರಿಸಿದರೆ, ಇಂಥ ಸ್ಥಿತಿ ತಲೆದೋರುವುದ ನ್ನಾಗಲೀ ಉಲ್ಬಣಗೊಳ್ಳುವುದನ್ನಾಗಲೀ ತಡೆಗಟ್ಟುವುದು ಸಾಧ್ಯ.

	ವಾಕ್-ಶ್ರವಣ ಭಾಷಾ ದೋಷಗಳನ್ನು ಪತ್ತೆ ಹಚ್ಚಿ ಸೂಕ್ತ ಸಹಾಯ ನೀಡುವ ಜವಾಬ್ದಾರಿ ಕೇವಲ ವಾಕ್-ಶ್ರವಣ ಭಾಷಾತಜ್ಞರದ್ದೇ ಎಂದು ಕಡ್ಡಾಯವೇನಿಲ್ಲ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಇಂತಹ ಸ್ಥಿತಿಗೆ ಒಳಪಟ್ಟವರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬಹುದು. ವಾಕ್-ಭಾಷಾ-ಶ್ರವಣ ವೈಕಲ್ಯತೆಗಳಿಗೆ ಒಳಪಟ್ಟ ವ್ಯಕ್ತಿಗಳಿಗೆ ಭಾರತ ಸರ್ಕಾರ ಹಲವಾರು ರೀತಿಯ ಸಹಾಯ ನೀಡುತ್ತಿದೆ. 	(ನೋಡಿ- ಅಖಿಲಭಾರತ-ವಾಕ್‍ಶ್ರವಣ-ಸಂಸ್ಥೆ)			
	(ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ